ಫ್ರೋಮ್ - ರಿಚ್ ಮನ್, ಫ್ರೈಡಾ
	1899-1957. ಮನೋವಿಜ್ಞಾನಿ. 1889 ಅಕ್ಟೋಬರ್ 23ರಂದು ಜರ್ಮನಿಯ ಕಾರ್ಲ್‍ಶ್ರೂ ಎಂಬಲ್ಲಿ ಜನನ. ಕೋನಿಗ್ಸ್‍ಬರ್ಗ್‍ನಲ್ಲಿ ವಿದ್ಯಾಭ್ಯಾಸ. 1914ರಲ್ಲಿ ಎಂ.ಡಿ. ಪದವಿ. ಒಂದನೆಯ ಮಹಾ ಯುದ್ಧಕಾಲದಲ್ಲಿ ಮಿದುಳಿಗೆ ತೀವ್ರ ಪೆಟ್ಟು ಬಿದ್ದು. ಮಾನಸಿಕ ಅಸ್ವಸ್ಥರಾದ ಸೈನಿಕರನ್ನು ಉಪಚರಿಸುತ್ತಿದ್ದ ಕರ್ಟ್ ಗೋಲ್ಡ್‍ಸ್ಟೈನ್ ಅವರಿಗೆ ಸಹಾಯಕಿಯಾಗಿ ಕೆಲಸ ನಿರ್ವಹಿಸಿದ ಅನಂತರ ಫ್ರೈಡಾಳ ಆಸಕ್ತಿ ಮಾನಸಿಕ ರೋಗಿಗಳತ್ತ ಹೊರಳಿತು. ಆದ್ದರಿಂದ ಆಕೆ ಡ್ರೆಸ್‍ಡೆನ್ ಬಳಿಯ ವೈಸರ್ ಹಿರ್ಷ್‍ಸ್ಯಾನೆಟೋರಿಯಮ್ಮಿನ ಪ್ರಸಿದ್ಧ ವೈದ್ಯ ಹಾಗೂ ಮನೋವಿಜ್ಞಾನಿಯಾದ ಜೆ.ಎಚ್.ಪುಲ್ಟ್ಸ್ ಎಂಬವನ ಬಳಿ ಮನೋವಿಶ್ಲೇಷಣಾ ತರಬೇತಿ ಪಡೆದಳು. ಇದೇ ವೇಳೆ ತನ್ನನ್ನು ಬಹುವಾಗಿ ಕಾಡುತ್ತಿದ್ದ ಮಾನಸಿಕ ಸಮಸ್ಯೆಗಳಿಗೆ ಫ್ರಾಯ್ಡನ ಸಿದ್ಧಾಂತ ಮತ್ತು ಬರಹ ಓದಿ ಪರಿಹಾರ ಕಂಡುಕೊಂಡಳು. ತರಬೇತಿ ಮುಗಿದ ಬಳಿಕ, ಮಾನಸಿಕ ರೋಗಿಗಳ ಆರೈಕೆಗಾಗಿ ಹೈಡೆಲ್ಬರ್ಗ್‍ನಲ್ಲಿ ಸ್ಯಾನೆಟೋರಿಯಮ್ ಒಂದನ್ನು ತೆರೆದಳು. ಪತಿ ಎರಿಚ್ ಪ್ರೋಮ್ ಅವರ ಸಹಕಾರದಿಂದ ನೈಋತ್ಯ ಜರ್ಮನಿಯಲ್ಲಿ ಮನೋವಿಶ್ಲೇಷಣಾ ತರಬೇತಿ ಸಂಸ್ಧೆಯನ್ನು ಸ್ಧಾಪಿಸಿದಳು.

	ಹಿಟ್ಲರ್ ಅಧಿಕಾರಕ್ಕೆ ಬಂದಾಗ, ಫ್ರೈಡಾ ನಿರಾಶ್ರಿತಳಾಗಿ ಆಲ್‍ಸೇಸ್ ಲೊರೈನ್ ಎಂಬಲ್ಲಿ ತಾತ್ಕಾಲಿಕ ಆಶ್ರಯ ಪಡೆದಳು. ಅನಂತರ ಪ್ಯಾಲಸ್ತೈನಿನಲ್ಲಿ ಕೆಲವು ಕಾಲವಿದ್ದು. 1935ರಲ್ಲಿ ಅಮೆರಿಕ ದೇಶಕ್ಕೆ ವಲಸೆ ಹೋದಳು. ಅಲ್ಲಿ ಮೇರಿಲ್ಯಾಂಡಿನ ರಾಕ್ವಿಲ್ಲೆ ಎಂಬಲ್ಲಿರುವ ಖಾಸಗಿ ಸ್ಯಾನೆಟೋರಿಯಮ್ ಚೆಸ್ಟ್‍ನಟ್ ಲಾಡ್ಚ್‍ನಲ್ಲಿ ಕೆಲಕಾಲ ಕೆಲಸಮಾಡಲು ಆಕೆಗೆ ಆಹ್ವಾನ ಬಂದಿತು. ಅಲ್ಲಿ ಎರಡು ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶವಿತ್ತು. ಆದರೆ ಆಹ್ವಾನ ಬಂದಿತು. ಅಲ್ಲಿ ಎರಡು ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶವಿತ್ತು. ಆದರೆ ಮುಂದೆ ಅಲ್ಲಿಯೇ ಇಪ್ಪತ್ತೆರಡು ವರ್ಷ ಉಳಿದಳು. 1940ರ ವೇಳೆಗೆ ಹ್ಯಾರಿ ಸ್ಟಾಕ್ ಸುಲ್ಲಿವಾನ್ ಎಂಬವನ ಒಡನಾಟ ಲಭಿಸಿದಾಗಿನಿಂದ, ಮನೋವಿದಳನ (ಶಿಜೋಫ್ರೇನಿಯ) ರೋಗದ ಬಗ್ಗೆ ಹೆಚ್ಚು ತಿಳಿಯಲು ಅವಕಾಶವಾಯಿತು. ಈ ರೋಗವನ್ನು ಕುರಿತು ಅನೇಕ ವೈಜ್ಞಾನಿಕ ಪ್ರಯೋಗ ನಡೆಸಿ ಸಫಲಳಾದಳು. ಫಲಿತಾಂಶಗಳ ಪ್ರಕಟನೆ ಈಕೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು.

	ಮಾನಸಿಕ ರೋಗಗಳನ್ನು ವಿಶ್ಲೇಷಿಸುವುದರಲ್ಲಿ, ಶಿಷ್ಯರೊಂದಿಗೆ, ಮನೋವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ ಮಾಡುವಲ್ಲಿ ಈಕೆಗೆ ಅಧಿಕ ಆಸಕ್ತಿ. ಮಾನಸಿಕ ರೋಗಗಳ ವಿಶ್ಲೇಷಣೆಗೂ ರೋಗಿಗಳ ಶುಶ್ರೂಷೆಗೂ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಳ್ಳು. ಫ್ರೈಡಾ ಒಬ್ಬ ಸಮರ್ಥ ವೈದ್ಯೆ, ಮನೋವಿಜ್ಞಾನಿ, ಪ್ರಾಧ್ಯಾಪಿಕೆ ಮತ್ತು ಸಂಶೋಧಕಿ. ಮನೋರೋಗಿಗಳ ಬಗ್ಗೆ ಆಕೆಗಿದ್ದ ಅನುಕಂಪ, ಮಾನವೀಯತೆ. ಆಕೆಯ ಶುಶ್ರೂಷಾ ರೀತಿ ಮುಂತಾದವನ್ನು ಕುರಿತು ಒಬ್ಬ ರೋಗಿ ಒಂದು ಪುಸ್ತಕವನ್ನೇ ಪ್ರಕಟಿಸಿದ್ದಾನೆ.

	ಫ್ರೈಡಾ ನಡೆಸಿದ ಸಂಶೋಧನೆಗಳಿಗೆ, 1952ರಲ್ಲಿ ಅಡಾಲ್ಫ್ ಮೇಯರ್ ಪ್ರಶಸ್ತಿ ದೊರೆಯಿತು. ವರ್ತನ ವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಕೇಂದ್ರದ ಫೆಲೋ ಆಗಿದ್ದಾಗ (1955-56) ಈಕೆ ಸಂವಹನದ ಅಶಾಬ್ದಿಕ ಅಂಶಗಳ (ನಾನ್‍ವರ್ಬಲ್ ಆ್ಯಸ್ಪೆಕ್ಟ್ಸ್ ಆಫ್ ಕಮ್ಯೂನಿಕೇಶನ್) ಅಧ್ಯಯನದಲ್ಲಿ ತೊಡಗಿದ್ದಳು. ಈಕೆಯ ಪ್ರಮುಖ ಕೃತಿಗಳಿವು: ದಿ ಫಿಲಾಸಫಿ ಆಫ್ ಇನ್‍ಸ್ಯಾನಿಟಿ (1947). ಪ್ರಿನ್ನಿಪಲ್ಸ್ ಆಫ್ ಇನ್ಟೆನ್ಸಿವ್ ಸೈಕೋಥೆರಪಿ (1950).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ